ಎಲ್ಲಮ್ಮ: ಬೆಳಗಾಂವಿ ಜಿಲ್ಲೆಯ ಪರಸ್ಗಡ ತಾಲ್ಲೂಕಿಗೆ ಸೇರಿರುವ ಸವದತ್ತಿಯಲ್ಲಿರುವ ಒಂದು ಪ್ರಸಿದ್ಧ ದೇವತೆ.   

ಧಾರ್ಮಿಕವಾಗಿ, ಪ್ರಚಲಿತವಿರುವ ಒಂದು ಆಧಾರದಮೇರೆಗೆ ಎಲ್ಲಮ್ಮನ ದೇವಸ್ಥಾನ ಸುಮಾರು 2,000 ವರ್ಷಗಳಷ್ಟು ಪ್ರಾಚೀನವಾದದ್ದು. ಆದಿಯಿಂದಲೂ ರೇಣುಕೆಯ ಆವಾಸಸ್ಥಾನವಾಗಿರುವಂಥದು. ಆದರೆ ಈ ವಿಷಯದಲ್ಲಿ ಒಮ್ಮತವಿಲ್ಲ. ಶಂ.ಬಾ. ಜೋಷಿ ಹಾಗೂ ಬೆಟಗೇರಿ ಕೃಷ್ಣಶರ್ಮ ಮುಂತಾದ ವಿದ್ವಾಂಸರು ಈಗಿರುವ ಎಲ್ಲಮ್ಮನ ದೇವಸ್ಥಾನ ಅಷ್ಟೊಂದು ಪ್ರಾಚೀನವಾದುದಲ್ಲವೆಂದೂ ಜೈನವಾಸ್ತುಶಿಲ್ಪದ ವಿಶಿಷ್ಟಾಂಶಗಳಿಂದೊಡ ಗೂಡಿರುವ ಆ ಗುಡಿಯಲ್ಲಿ ಪ್ರತಿಷ್ಠಾಪಿತಳಾಗಿರುವ ದೇವತೆ ಎಲ್ಲಮ್ಮನಲ್ಲ, ಪದ್ಮಪುಷ್ಪಪಾಣಿ ಯಾಗಿರುವ ಯಕ್ಷಿ ಪದ್ಮಾವತಿ ದೇವಿಯೆಂದೂ ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಈಗ್ಗೆ ಕೆಲವು ವರ್ಷಗಳ ಹಿಂದೆ ಆ ಮೂಲ ಜೈನ ಬಸದಿಯ ದ್ವಾರದ ಮೇಲಿದ್ದು ಜಿನಮೂರ್ತಿಯನ್ನು ಈಚೆಗೆ ಕೆತ್ತಿ ಹಾಕಿರುವ ಗಮನಾರ್ಹ ಸಂಗತಿಯನ್ನೂ ಹೊರಗೆಡವಿದ್ದಾರೆ.

ಸು. 1514 ರಲ್ಲಿ ಸವದತ್ತಿ ಪ್ರಾಂತ್ಯದಲ್ಲಿ ಪ್ರಬಲನಾಗಿದ್ದ ಬಾಗಿಬೊಮ್ಮಪ್ಪನಾಯ್ಕನೆಂಬಾತ ಈಗಿನ ಎಲ್ಲಮ್ಮನ ಗುಡಿಯ ದಕ್ಷಿಣಕ್ಕಿರುವ ನಗಾರಖಾನೆಯನ್ನು ಕಟ್ಟಿಸಿದ್ದರ ಬಗೆಗೆ ತಾನು ಹಾಕಿಸಿದ ಶಾಸನದಲ್ಲಿ ಆ ದೇವತೆಯನ್ನು ಜತ್ತಕ ಎಂದು ಕರೆದಿರುವುದು ಮತ್ತೊಂದು ಮುಖ್ಯಾಂಶ. ಯಕ್ಷಿಣಿ>ಜಕ್ಕಿಣಿ>ಜತ್ತಕ್ಕ>ಜತ್ತಕ-ಹೀಗೆ ಜನರ ಬಾಯಲ್ಲಿ ರೂಪಾಂತರಗೊಂಡಿರಬಹುದಾದ ಆ ದೇವತೆ ಮೂಲತಃ ಜೈನ ದೇವತೆಯೇ ಆಗಿರ ಬೇಕೆಂದೂ ಕಾಲಕ್ರಮೇಣ ಅದು ವೈದಿಕ ದೇವತೆಯಾಗಿ ಪರಿವರ್ತಿತವಾಗಿರಬಹುದೆಂದೂ ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಈಗ ಮಾತ್ರ ಆ ದೇವತೆ ಶುದ್ದ ಹಿಂದೂ ದೇವಿಯಾಗಿದ್ದಾಳೆ. ಪುಜಾರಿಗಳು, ಆಡಳಿತವರ್ಗದವರೆಲ್ಲ ವೀರಶೈವರು.

ನಂಬಿ ನೆಚ್ಚಿ ನಡೆದುಕೊಳ್ಳುವ ಭಕ್ತಾದಿಗಳಿಗೆ ಇಷ್ಟಾರ್ಥಗಳನ್ನು ಕೊಡುವಳೆಂದು ಹೆಸರಾಗಿರುವ ಎಲ್ಲಮ್ಮನಿಗೆ ಎಲ್ಲ ಜಾತಿ ಪಂಥದಲ್ಲೂ ಭಕ್ತವರ್ಗವಿದೆ. ನನ್ನ ಕ್ಷೇತ್ರಕ್ಕೆ ಯಾವತ್ತು ಹೊಸ ಭಕ್ತಾದಿಗಳು ಬರುವುದಿಲ್ಲವೋ ಆ ದಿನದಿಂದಲೇ ನಾನು ಅಲ್ಲಿಲ್ಲವೆಂದು ತಿಳಿಯಿರಿ-ಎಂದು ದೇವಿ ಸತ್ಯಕ್ಕ (ಎಲ್ಲಮ್ಮನ ಇನ್ನೊಂದು ಹೆಸರು) ಭಾಷೆ ಕೊಟ್ಟಿದ್ದಾಳೆಂಬುದು ಜನರ ನಂಬಿಕೆ. ಆದ್ದರಿಂದಲೇ ಪ್ರತಿದಿನವೂ ನೂರಾರು ಜನ ಬರುತ್ತಿರುತ್ತಾರೆ. ಪ್ರತಿ ಮಂಗಳವಾರ ಶುಕ್ರವಾರಗಳಂದು ವಿಶೇಷ ಪುಜೆ ಪುನಸ್ಕಾರಗಳಾಗುವುದರಿಂದ ಜನಸಂದಣಿಯೂ ಹೆಚ್ಚುತ್ತದೆ. ಪ್ರತಿ ಹುಣ್ಣಿಮೆಯ ದಿನವಂತೂ ದೊಡ್ಡ ಜಾತ್ರೆಯೇ ಆಗುತ್ತದೆ; ಬರಾತನ ಹುಣ್ಣಿಮೆಯಿಂದ (ಭಾರತ ಹುಣ್ಣಿಮೆ) ಒಂದು ತಿಂಗಳವರೆಗೆ ವಾರ್ಷಿಕ ಜಾತ್ರೆ ನಡೆಯುತ್ತದೆ. ಆ ಸಮಯದಲ್ಲೆ ಕನಿಷ್ಠ ಎರಡು ಲಕ್ಷ ಜನ ಸೇರುತ್ತಾರೆಂದು ಅಂದಾಜು ಮಾಡಲಾಗಿದೆ.

ಪೌರಾಣಿಕವಾಗಿಯೂ ಆ ಕ್ಷೇತ್ರದೇವತೆಯನ್ನು ಕುರಿತು ಭಿನ್ನಾಭಿಪ್ರಾಯಗಳಿವೆ. ಭಾಗವತ, ಹರಿವಂಶ ಮುಂತಾದ ವೈದಿಕ ಪುರಾಣಗಳ ಪ್ರಕಾರ ವಿಷ್ಣುವಿನ ಪರಶುರಾಮಾವತಾರದಲ್ಲಿ ಆತನಿಗೆ ಆ ಜನ್ಮವಿತ್ತ ತಾಯಿ ರೇಣುಕೆಯೇ ಸವದತ್ತಿಯ ಎಲ್ಲಮ್ಮ. ತಂದೆ ಜಮದಗ್ನಿಯ ಆಜ್ಞೆಯಂತೆ ತಾಯಿಯ ತಲೆ ಕಡಿದ ಆತ ತನ್ನ ತಾಯನ್ನು ಮತ್ತೆ ಬದುಕಿಸಿಕೊಳ್ಳಲು ವರಪಡೆದ. ಮತ್ತೊಂದು ಕಥೆಯಂತೆ ಕಾರ್ತವೀರ್ಯನಿಗೆ ಸೋದರಿ ಈ ರೇಣುಕೆ. ಮಗುದೊಂದರ ಪ್ರಕಾರ ಆತ ಅಳುಪಿ ವರಿಸ ಬಂiÀÄಸಿದ ಋಷಿಪತ್ನಿ ರೇಣುಕೆ ಆಕೆ.

ಅನೂಚಾನವಾಗಿ ನಡೆದುಬಂದ ಮೂಲ ಸಂಪ್ರದಾಯ, ಪರಂಪರಾಗತ ಆಚಾರ ವಿಚಾರಗಳಿಗೆ ಜೀವಂತ ಸಾಕ್ಷಿ ನುಡಿಯುವ ಜಾನಪದದಲ್ಲಿ ರೂಢಿಯಲ್ಲಿರುವ ಕಥೆಗಳ ಪ್ರಕಾರ, ರೇಣುಕ ರಾಜನ ಮಗಳೇ ರೇಣುಕೆ. ಜಮದಗ್ನಿಯ ಧರ್ಮಪತ್ನಿ. ಒಂದು ದಿನ ಪುಜಾವಿಧಿಗಳಿಗೆ ನೀರು ತಂದುಕೊಡಲು ತಡಮಾಡಿದಾಗ ಆಕೆಗೆ ತೊನ್ನಿಯಾಗೆಂದು ಋಷಿ ಶಾಪಕೊಟ್ಟ. ಆಕೆ ಆ ಶಾಪದಿಂದ ದುಃಖಿತೆಯಾಗಿ ತೊಳಲಿ ಅಲೆಯುತ್ತ ಸವದತ್ತಿಯ ಈಗಿನ ಜೋಗುಳ ಬಾವಿಯ ಹತ್ತಿರವಿರುವ ಮರದ ತೋಪಿಗೆ ಬಂದು ನೋಡಿದಾಗ ಎಕ್ಕಯ್ಯ, ಜೋಗಯ್ಯ ಎಂಬಿಬ್ಬರ ಘನಸಿದ್ದರ ದರ್ಶನವಾಯಿತು. ತನ್ನ ದುಃಸ್ಥಿತಿಯನ್ನೆಲ್ಲ ಅವರಿಗೆ ಭಯಭಕ್ತಿಯಿಂದ ನಿವೇದಿಸಿಕೊಂಡಾಗ ಅವರು ಜೋಗುಳ ಬಾವಿಯಲ್ಲಿ ಮಿಂದು, ಅಲ್ಲಿರುವ ಅರೆಯ ಮೇಲೆ ಅರೆದ ಅರಿಶಿಣವನ್ನು ಮೈಗೆಲ್ಲ ತೊಡೆದುಕೊಂಡರೆ ತೊನ್ನು ರೋಗ ಹೋಗುತ್ತದೆ ಎಂದು ಹಿತವಚನ ನುಡಿದರು. ಆಕೆ ಹಾಗೆ ಮಾಡಿದಾಗ ತೊನ್ನೆಲ್ಲ ಮಾಯವಾಯಿತಲ್ಲದೆ ಅವಳ ದೇಹಕಾಂತಿ ನೂರ್ಮಡಿಸಿತು. ಅತ್ಯಂತ ಹರ್ಷ ಹಾಗೂ ಉತ್ಸಾಹದಿಂದ ಹಿಂದಿರುಗಿ ಬಂದು ಎಕ್ಕಯ್ಯ ಜೋಗಯ್ಯರ ಹೆಸರು ಶಾಶ್ವತವಾಗಲೆಂದೂ ಜೋಗುಳ ಬಾವಿಗೆ ಎಲ್ಲ ದುಷ್ಟ ರೋಗನಿವಾರಕ ಶಕ್ತಿ ತುಂಬಿಬರಲೆಂದೂ ಹಾರೈಸಿ ತನ್ನ ಗಂಡನ ಬಳಿಗೆ ಹೋಗಿ ಸುಖವಾಗಿರತೊಡಗಿದಳು. ಅವಳು ಹೊಕ್ಕು ಊರ್ಜಿತಗೊಳಿಸಿದ ಸವದತ್ತಿಯ ಆ ಪ್ರದೇಶವೇ ಮುಂದೆ ಎಲ್ಲಮ್ಮನ ಆವಾಸ ಸ್ಥಾನವಾಯಿತು, ಪವಿತ್ರ ಕ್ಷೇತ್ರವಾಯಿತು.

ಮತ್ತೊಂದು ಜನಪದ ಕಥೆಯ ಮೇರೆಗೆ ಒಮ್ಮೆ ಕಾರ್ತವೀರ್ಯಾರ್ಜುನ ತನ್ನ ಪ್ರೇಯಸಿಯರೊಂದಿಗೆ ಜಲಕ್ರೀಡೆಯಾಡುತ್ತಿದ್ದುದನ್ನು ಕಂಡ ರೇಣುಕೆಯ ಮನಸ್ಸು ವಿಚಲಿತವಾಯಿತು. ಒಂದು ಹುಣ್ಣಿಮೆಯ ದಿನ ಕಾರ್ತವೀರ್ಯ ಜಮದಗ್ನಿಯನ್ನು ಕೊಂದ. ಆದ್ದರಿಂದಲೇ ಅದು ರಂಡೆ ಹುಣ್ಣಿಮೆಯಾಯಿತು. ಆದರೆ ಸ್ವರ್ಗದಿಂದ ಅಮೃತಕಲಶ ತಂದು ಆತನನ್ನು ಬದುಕಿಸಿದ್ದು ಇನ್ನೊಂದು ಹುಣ್ಣಿಮೆಯ ದಿನವೇ. ಆಗ ರಂಡೆಯಾಗಿದ್ದ ಎಲ್ಲಮ್ಮ ಮತ್ತೆ ಮುತ್ತೈದೆಯಾದಳಾದ್ದರಿಂದ ಅದು ಮುತ್ತೈದೆ ಹುಣ್ಣಿಮೆಯಾಯಿತು. ಈ ಎರಡು ಹುಣ್ಣಿಮೆಗಳಲ್ಲೂ ಅದ್ದೂರಿಯಾದ ಉತ್ಸವಗಳಾಗುತ್ತವೆ. ರಂಡೆ ಹುಣ್ಣಿಮೆಯಂದು ದೇವತೆಯ ಕೈಬಳೆಗಳನ್ನೆಲ್ಲ ಒಡೆದು ತೆಗೆದುಹಾಕಿ ಮುತ್ತೈದೆ ಹುಣ್ಣಿಮೆಯ ದಿನ ಮತ್ತೆ ಕೈತುಂಬ ಹೊಸಬಳೆ, ಕರಿಮಣಿ, ಇತ್ಯಾದಿ ಮಂಗಳವಸ್ತು ಒಡವೆಗಳಿಂದ ದೇವತೆಯನ್ನು ಅಲಂಕರಿಸುತ್ತಾರೆ. ತಂದೆಯ ಆಜ್ಞೆಯಂತೆ ಪರಶುರಾಮ ರೇಣುಕೆಯ ಶಿರವನ್ನು ಕಡಿದಂತೆ ತಲೆ ಚಿಗುರುತ್ತಲೇ ಹೋಯಿತಂತೆ. ಆದ್ದರಿಂದ ಹಾಗೆ ಪ್ರತಿಯೊಂದು ಕಡಿತದಿಂದಲೂ ಸಿಡಿದುಬಂದ ಉಗ್ರದೇವತೆಗಳೇ ಪ್ಲೇಗು, ಸಿಡುಬು, ಕಾಲರ ಮುಂತಾದ ಮಾರಿರೋಗಗಳು. ರೋಸಿಹೋದ ರೇಣುಕೆ ಗುಡ್ಡದ ಎಲ್ಲಮ್ಮನಾಗಿ ಅಲ್ಲಿ ಬಂದು ನೆಲೆಸಿದಳು; ತನ್ನ ಗಂಡ ಮಕ್ಕಳಿಂದ ದೂರವಿರಬಂiÀÄಸಿದಳು. ಆದ್ದರಿಂದಲೇ ಜಮದಗ್ನಿ ಹಾಗೂ ಪರಶುರಾಮರ ಗುಡಿಗಳು ಎಲ್ಲಮ್ಮನ ಗುಡಿಯಿಂದ ದೂರ ದೂರ ಇವೆ. ತಾಯಿಯ ಮೇಲೆ ಕೊಡಲಿ ಎತ್ತಿದ ತಪ್ಪಿಗೆ ಪ್ರಾಯಶ್ಚಿತ್ತರೂಪವಾಗಿ ನಿರಂತರವಾಗಿ ತಾಯಿ ಎಲ್ಲಮ್ಮನ ಸ್ತುತಿ ಮಾಡುತ್ತಲೇ ಇದ್ದಾನಂತೆ, ಪರಶುರಾಮ. ಆದರೆ ಆಕೆ ಅದನ್ನು ಕೇಳಿಸಿಕೊಳ್ಳುವುದಿಲ್ಲವಂತೆ!

ಜನಪದದಲ್ಲಿ ರೂಢಮೂಲ ನಂಬಿಕೆಯಾಗಿ ಬೆಳೆದು ಆಚರಣೆಯಲ್ಲಿರುವ ಈ ಕಥೆಗಳಲ್ಲಿ ಕ್ವಚಿತ್ತಾಗಿ ಐತಿಹಾಸಿಕ, ಪೌರಾಣಿಕ ಸಂಗತಿಗಳು ವಿಚಿತ್ರವಾಗಿ ಹೆಣೆದುಕೊಂಡಿ ರುವುದರ ಸುಳಿವನ್ನು ಕಾಣಬಹುದಾಗಿದೆ. ವೀರಶೈವರು ತಮ್ಮದೇ ಆದ ರೀತಿಯಲ್ಲಿ ಎಲ್ಲಮ್ಮನ ಕಥೆಕಟ್ಟಿ ಹೇಳಿರುವುದನ್ನು ಗಮನಿಸಬೇಕು. ಆ ಪ್ರಕಾರ, ಒಂದಾನೊಂದು ಕಾಲದಲ್ಲಿ ಉಗುರುಗೊಳ್ಳ ಗ್ರಾಮದಲ್ಲಿ ಶ್ರೀಮಂತ ವೀರಶೈವ ಗೃಹಸ್ಥನೊಬ್ಬನಿದ್ದ. ಆತನ ಮಗಳೇ ಎಲ್ಲಮ್ಮ. ಬೆಳೆಯುವ ಕಾಲಕ್ಕೆ ಆಕೆಗೆ ತೊನ್ನು ಹತ್ತಿತ್ತು. ಯಾರೂ ಮದುವೆಯಾಗಬಂiÀÄಸಲಿಲ್ಲ. ಹೀಗಿರುವಲ್ಲಿ ಸವದತ್ತಿಗೆ ಹೋದಾಗ ಗುಡ್ಡದಲ್ಲಿ ಎಕ್ಕಯ್ಯ ಜೋಗಯ್ಯರ ಪಾದುಕೆಯ ಮೇಲಿನ ಮಳೆನೀರು ಬಿದ್ದಕ್ಷಣವೇ ತೊನ್ನು ಮಾಯವಾಯಿತು. ಆಗ ಆಕೆ ಸಿದ್ಧರ ಧ್ಯಾನದಲ್ಲಿ ಅಲ್ಲೇ ಕುಳಿತಳು. ಕೊನೆಗೆ ಪ್ರತ್ಯಕ್ಷರಾದ ಅವರು ಎಲ್ಲ ರೀತಿಯ ಯಂತ್ರ ಮಂತ್ರ ರಸವಿದ್ಯೆಗಳನ್ನು ಹೇಳಿಕೊಟ್ಟರಲ್ಲದೆ, ಶಿವಪಂಚಾಕ್ಷರಿ ಮಂತ್ರವನ್ನೂ ಆಕೆಗೆ ಉಪದೇಶಿಸಿದರು. ನೀನು ಮಾಯಾಕಾತಿಯಾಗು, ಭಕ್ತಜನ ಜಗವನ್ನು (ಅಲಂಕೃತಬಿಂದಿಗೆ) ಹೊತ್ತು ಕುಣಿಯುತ್ತ ನಿನ್ನಲ್ಲಿಗೆ ಬರುವಂತಾಗಲಿ ಎಂದು ಆಶೀರ್ವದಿಸಿ ಅಲ್ಲೇ ಅಂತರ್ಧಾನವಾದರು. ಅಂದಿನಿಂದ ಎಲ್ಲಮ್ಮ ಸತ್ಯಕ್ಕನೆಂಬ ಅನ್ವರ್ಥಕ ಹೆಸರಿನಿಂದ ಅಲ್ಲೇ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತ ಬರುತ್ತಿದ್ದಾಳೆ. ಆ ಸಿದ್ಧರು ಪ್ರತ್ಯಕ್ಷರಾದ ಕಿಚ್ಚಿನಕುಂಡವೇ ರೋಗನಾಶಿನಿಯಾದ ಈಗಿನ ಜೋಗುಳ ಬಾವಿ; ಜೋಗಪ್ಪ ಜೋಗಮ್ಮರ ವೇಷಭೂಷಣಗಳನ್ನು ಧರಿಸಿಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಜಗ ಹೊತ್ತುಕೊಂಡು ಕುಣಿಯುತ್ತ ಬರುವ ಎಲ್ಲಮ್ಮನ ಭಕ್ತರನ್ನು ಬಿಜಾಪುರ, ಬೆಳಗಾಂವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಣಬಹುದು.

ಸಾಮಾಜಿಕ ಹಾಗೂ ನೈತಿಕ ದೃಷ್ಟಿಯಿಂದ ಕೂಡ ಎಲ್ಲಮ್ಮ ತುಂಬ ಪ್ರಭಾವ ಬೀರಿದ ಶಕ್ತಿಯಾಗಿದ್ದಾಳೆ. ಅನೇಕ ಜಾತಿಯವರು-ಹೆಚ್ಚಾಗಿ ಹರಿಜನರು-ಎಲ್ಲಮ್ಮನ ಭಕ್ತರಾಗಿ, ಜೋಗಯ್ಯನೋ ಜೋಗಮ್ಮನೋ ಆಗಿ ದೀಕ್ಷೆಪಡೆದುಕೊಳ್ಳುತ್ತಾರೆ. ಅವರು ಶಾಸ್ತ್ರೋಕ್ತವಾಗಿ ಮದುವೆಯಾಗುವಂತಿಲ್ಲ; ದೇವದಾಸಿಯರಂತೆ ನಡೆದುಕೊಳ್ಳಲು ಅವಕಾಶವಿದೆ.
ಇಷ್ಟರಮಟ್ಟಿಗೆ ಜನಮನದಲ್ಲಿ ಬೇರೂರಿ ಬೆಳೆದಿರುವ ಪರಂಪರಾಗತ ನಂಬಿಕೆ, ಭಕ್ತಿಗಳ ಸಂಕೇತವಾಗಿ ಬಹು ಹಿಂದಿನಿಂದಲೂ ಬೆನ್ನುಸಿಡಿಯಾಡುತ್ತಿದ್ದುದೂ ಉಗ್ರಕೊಂಡ ಹಾಯುತ್ತಿದ್ದುದೂ ರೂಢಿಯಲ್ಲಿತ್ತು. ಈಗ ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲದೆ ದಕ್ಷಿಣ ಕರ್ನಾಟಕದ ಅನೇಕ ಕಡೆಗಳಲ್ಲಿ ಎಲ್ಲಮ್ಮನ ದೇವಸ್ಥಾನಗಳಿವೆ. ತುಮಕೂರು ಜಿಲ್ಲೆಯ ಕುಣಿಗಲ್ನಿಂದ 10 ಕಿಮೀ ದೂರದಲ್ಲಿರುವ ಗುನ್ನಾಗರೆ ಎಂಬ ಗ್ರಾಮದಲ್ಲಿ ಪ್ರತಿವರ್ಷವೂ ಎಲ್ಲಮ್ಮ ದೇವತೆಯ ಜಾತ್ರೆ ನೆಡೆದು ಬೆನ್ನುಸಿಡಿ, ಕೊಂಡಹಾಯುವುದು ಮುಂತಾದವೆಲ್ಲ ನಡೆಯುತ್ತವೆ ಎಂಬುದು ಗಮನಾರ್ಹ ಸಂಗತಿ. ಆದರೆ ಈ ಎಲ್ಲಮ್ಮನ ಪುಜಾರಿಗಳು ಎಲೆ ಬಣಜಿಗರಾದರೂ ಬೆನ್ನುಸಿಡಿ ಆಡುವವರು ಮಾತ್ರ ಇಲ್ಲೂ ಹರಿಜನರೇ ಎಂಬುದು ಮುಖ್ಯಾಂಶ.
ಸವದತ್ತಿ (ನೋಡಿ- ಸವದತ್ತಿ) ಕ್ಷೇತ್ರ ತುಂಬ ರಮಣೀಯವಾದ ಪ್ರವಾಸಿ ಕೇಂದ್ರವೂ ಆಗಿದೆ. ಗುಡ್ಡಗಳ ಸಾಲಿನಿಂದ, ಪಕ್ಕದಲ್ಲೇ ಬೆಳೆದ ತೆಂಗು, ಬಾಳೆ, ಕಬ್ಬಿನ ತೋಟಗಳಿಂದ ಆಕರ್ಷಕವಾಗಿರುವ ಇದು ಧಾರವಾಡದಿಂದ ಉತ್ತರಕ್ಕೆ 37 ಕಿಮೀ ದೂರದಲ್ಲಿದೆ. ಬೆಳಗಾಂವಿಯಿಂದ 80 ಕಿಮೀ ಮೈಲಿ ಪುರ್ವಕ್ಕಿದೆ. ರೈಲು ಪ್ರಯಾಣದ ಸೌಲಭ್ಯವಿಲ್ಲ. ಆದರೆ ಬಸ್ಸುಗಳು ಸಾಕಷ್ಟು ಓಡುತ್ತವೆ. ನೀರು ವಸತಿಗೃಹದ ವ್ಯವಸ್ಥೆಯೂ ಈಚೆಗೆ ಸುಧಾರಿಸಿದೆ.                                                 (ಎನ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ